ದಖನೀ ಭಾಷೆ, ಸಾಹಿತ್ಯ

ಉತ್ತರ ಭಾರತದಲ್ಲಿಗಿಂತ ಮೂರು ಶತಕ ಮೊದಲೇ ದಕ್ಷಿಣಭಾರತದಲ್ಲಿ ಹುಟ್ಟಿ ವಿಕಸನಗೊಂಡ ಉರ್ದು ಸಾಹಿತ್ಯ, ಗುಲ್ಬರ್ಗ ಬಿಜಾಪುರ, ಗೋಲ್ಕೊಂಡ, ಬೀದರ್, ಅಹ್ಮದ್ ನಗರಗಳಲ್ಲಿ ಕ್ರಮವಾಗಿ ಬಹಮನಿ, ಆದಿಲ್ ಶಾಹಿ, ಕುತುಬ್ ಶಾಹಿ, ಇಮಾದ್ ಶಾಹಿ, ನಿಜಾಂ ಶಾಹಿ ಮತ್ತು ಬರೀದ್ ಶಾಹಿಗಳ ರಾಜಧಾನಿಗಳಲ್ಲಿ ದಖನೀ ಸಾಹಿತ್ಯ ಚಟುವಟಿಕೆ ಪ್ರಾಧಾನ್ಯ ಪಡೆಯಿತು. ದಖನೀಸಾಹಿತ್ಯ ಚರಿತ್ರೆಯನ್ನು ಎರಡು ಕಾಲಗಳಾಗಿ ವಿಂಗಡಿಸಬಹುದು. ಧಾರ್ಮಿಕ ಕಾಲ (1350 - 1590) ಮತ್ತು ಸಾಹಿತ್ಯಿಕ ಕಾಲ (1590 - 1730). ದಖನಿಯನ್ನು ಮೊದಲಿಗೆ ಸೂಫಿಗಳು ಮತ್ತು ಧಾರ್ಮಿಕ ವಿದ್ವಾಂಸರು ತಮ್ಮ ಸೂಫೀ ಮತ್ತು ಧಾರ್ಮಿಕ ಬೋಧನೆಗಳಿಗೆ ಅಳವಡಿಸಿಕೊಂಡರು. ದಖನೀಭಾಷೆಯಲ್ಲಿ ಅವರು ಭಾಷಣ ಮತ್ತು ಉಪದೇಶಗಳನ್ನು ಮಾಡಿದರು. ಮೊದಲ ಗದ್ಯಗ್ರಂಥ ಮಿರಾಜ್ ಉಲ್ ಆಶೀಕೀನ್ ಮತ್ತು ಮೊದಲ ಪದ್ಯ - ಇವೆರಡೂ ಗುಲ್ಬರ್ಗದಲ್ಲಿ ಸಮಾಧಿ ಮಾಡಲ್ಪಟ್ಟ. ಸಾಮಾನ್ಯವಾಗಿ ಬಂದಾ ನವಾಜ್ ಗೇಸು ದರಾಸು ಎಂದು ಕರೆಯಲ್ಪಡುವ ಶ್ರೇಷ್ಠ ಸೂಫೀ ಸಾಧು ಸೈಯದ್ ಮಹಮದ್ ಹುಸೆನಿಗೆ ಆರೋಪಿತವಾಗಿವೆ. ಬಾಲ್ಯದಲ್ಲಿ ತನ್ನ ತಂದೆಯೊಡನೆ ದೌಲತಾಬಾದಿಗೆ ಬಂದ ಈತ ಹದಿನೈದನೆಯ ವಯಸ್ಸಿನಲ್ಲಿ ದೆಹಲಿಗೆ ಹೋದನಲ್ಲದೆ ಕೊನೆಗೆ ದಕ್ಷಿಣಕ್ಕೆ ಹಿಂತಿರುಗಿ ಬಂದು ತನ್ನ ವೃದ್ಧಾಪ್ಯದಲ್ಲಿ ಗುಲ್ಬರ್ಗದಲ್ಲಿ ನೆಲೆಸಿ (ಸು. 1412) ಕೇವಲ ಹತ್ತು ವರ್ಷಗಳ ಮೇಲೆ ಅಲ್ಲೇ ಮರಣಹೊಂದಿದ. ಆದ್ದರಿಂದ ಇವನ ನುಡಿಗಟ್ಟು ಆಗ ದೆಹಲಿಯಲ್ಲಿ ಪ್ರಚಲಿತವಿದ್ದ ಭಾಷೆಗೆ ಸಮಾನವಾಗಿದ್ದಿತ್ತೆಂದು ಭಾವಿಸಬಹುದು. ಷೇಖ್ ಆಯ್ನುದ್ದೀನ್ ಗಂಜುಲ್ ಹಂ (ಮರಣ 1393), ಷಾ ಮಿರಂಜಿ ಶಂಸುಲ್ ಉಷ್ತಾಖ್ (ಮರಣ 1496), ಅವನ ಮಗ ಷಾ ಬರ್ಹಾನುದೀನ್ ಜಾನಂ (ಮರಣ 1581) ಮತ್ತು ಅವನ ಮಗ ಅಮೀನುದ್ದೀನ್ ಅಲಾ (ಮರಣ 1665) - ಇವರೆಲ್ಲರೂ ಬಿಜಾಪುರದಲ್ಲಿ ಪ್ರವರ್ಧಮಾನರಾದರು. ಕೆಲವು ಸೂಫೀಗಳು ದಖನಿಯಲ್ಲಿ ಸಾಮಾನ್ಯ ಜನತೆಗೆಂದು ಗದ್ಯ ಪದ್ಯಕೃತಿಗಳನ್ನು ಬಿಟ್ಟುಹೋದರು. ಅಹಮದಾಬಾದಿನ ಷೇಖ್ ಖೂಬ್ ಮಹಮದ್ ಫಿಷ್ಟೀ (ಮರಣ 1578) ಮತ್ತು ಷೇಖ ಅಲಿಜೀ (ಮರಣ 1565) ಎಂಬುವರು ಗುಜ್ರಿ ಭಾಷೆಯ ಪ್ರಾತಿನಿಧಿಕಬರಹಗಾರರು. ಇವರ ಶ್ರೇಷ್ಠ ಕೃತಿಗಳೆಂದರೆ ಕ್ರಮವಾಗಿ ಖೂಬ್ ತರಂಗ್ ಮತ್ತು ಜವಾಹಿರುಲ್ ಅಸ್ರಾ ಎನ್ನುವ ಸೂಫೀ ಧರ್ಮಗ್ರಂಥಗಳು.

ದಖನೀ ಸಾಹಿತ್ಯಿಕ ಚರಿತ್ರೆಯನ್ನು ಮೂರು ಭಾಗಗಳಾಗಿ ಮಾಡಬಹುದು: 1 ಬಿಜಾಪುರದ ಆದಿಲ್ ಶಾಹಿ ಕಾಲ (1590 - 1686) ಗೋಲ್ಕೊಂಡದ ಕುತುಬ್ ಶಾಹಿ ಕಾಲ (1590 - 1687) ಮತ್ತು ಮೊಗಲರ ಕಾಲ (1687 - 1730). ಗಮನಾರ್ಹ ಸಂಗತಿಯೆಂದರೆ ಬಿಜಾಪುರದ ಆದಿಲ್‍ಶಾಹಿ ಮತ್ತು ಗೋಲ್ಕೊಂಡದ ಕುತುಬ್ - ಶಾಹಿಗಳು ಬರಹಗಾರರೂ ಆಗಿದ್ದರು. ಅವರ ಔದಾರ್ಯ ಮತ್ತು ಆಶ್ರಯಗಳು ತಮ್ಮ ದರ್ಬಾರಿಗೆ ಕವಿಗಳು. ವಿದ್ವಾಂಸರು ಹಾಗೂ ಬರಹಗಾರರನ್ನು ಆಕರ್ಷಿಸಿದುವು. ಎಲ್ಲ ಗೌರವ ಮತ್ತು ಅಂತಸ್ತುಗಳಿಂದಲೂ ಸುಲ್ತಾನರು ಅವರನ್ನು ನೋಡಿಕೊಂಡುದಲ್ಲದೆ ಕಾಲಕಾಲಕ್ಕೆ ಪಾರಿತೋಷಕಗಳನ್ನು ಉದಾರವಾಗಿ ನೀಡಿದರು. ಜಗದ್ಗುರು ಎಂದು ಕರೆಯಲ್ಪಟ್ಟ ಆದಿಲ್ ಶಾಹಿ ವಂಶದ 6 ನೆಯ ದೊರೆ ಇಬ್ರಾಹಿಂ ಆದಿಲ್ ಷಾ II ದಖನೀ ಭಾಷೆಯನ್ನು ಪರ್ಷಿಯನ್ನಿನ ಜಾಗದಲ್ಲಿ ದರ್ಬಾರ್ ಭಾಷೆಯನ್ನಾಗಿ ಮಾಡಿದ್ದಲ್ಲದೆ ದಖನೀ ಭಾಷೆಯಲ್ಲಿ ನೌರಸ್ (ನವರಸ) ಎಂಬ ಸಂಗೀತಶಾಸ್ತ್ರದ ಮೇಲಿನ ಶ್ರೇಷ್ಠ ಗ್ರಂಥವೊಂದನ್ನು ಬರೆದ. ಆತ ಕಾವ್ಯರಚನೆಯಲ್ಲೂ ಸುಂದರ ಬರವಣಿಗೆಯಲ್ಲೂ ಸಂಗೀತದಲ್ಲೂ ಪರಿಣತನಾಗಿದ್ದ. ಅವನ ದರ್ಬಾರಿನ ಶ್ರೇಷ್ಠ ಬರಹಗಾರ ಮತ್ತು ಜುಹೂರಿಯಿಂದ ಸಿಹ್ ನಾಸರ್ (ಮೂರು ಗ್ರಂಥ) ಎಂಬ ಕೃತಿ ಪರ್ಷಿಯನ್ ಭಾಷೆಯಲ್ಲಿ ಬರೆಯಲ್ಪಟ್ಟಿತು. ಭಾರತದಲ್ಲಿ ಬರೆಯಲ್ಪಟ್ಟ ಅತ್ಯಂತ ಶ್ರೇಷ್ಠ ಪರ್ಷಿಯನ್ ಗದ್ಯಕೃತಿ ಎನಿಸಿಕೊಂಡ ಇದು ರಾಜನ ಕೃತಿಗಳಿಗೆ ಅವತರಣಿಕೆ ಆಯಿತು. ಈ ಕೃತಿಯ ಭಾಷೆಯಲ್ಲಿ ಹೆಚ್ಚು ಸಂಸ್ಕøತದ ಪ್ರಭಾವವನ್ನು ಕಾಣಬಹುದು. ಆದಿಲ್‍ಷಾಹಿಯ 8 ನೆಯ ದೊರೆ ಅಲಿ ಆದಿಲ್ ಷಾII(1656 - 1673) ಸ್ವತಃ ಶ್ರೇಷ್ಠವರ್ಗದಕವಿಯಾಗಿದ್ದನಲ್ಲದೆ ಕಾವ್ಯರಚನೆಗೆ ಪ್ರೋತ್ಸಾಹವನ್ನು ನೀಡಿದ. ಬಿಜಾಪುರ ಅವನ ಕಾಲದಲ್ಲಿ ದಖನೀ ಕಾವ್ಯ ರಚನೆಗಳಿಂದ ಶ್ರೀಮಂತವಾಯಿತು. ಅವನು ಬಿಟ್ಟುಹೋಗಿರುವ ಕವನ ಸಂಕಲನ ಆ ಕಾಲದ ದಖನೀಭಾಷೆಯನ್ನು ಹಿಡಿದಿಟ್ಟಿರುವುದಲ್ಲದೆ ಅವನ ಕಾವ್ಯ ಪ್ರತಿಭೆಯನ್ನು ಎತ್ತಿ ತೋರಿಸುತ್ತದೆ. ಅವನಿಗೆ ಅನೇಕ ವಿದ್ಯಾರ್ಥಿಗಳಿದ್ದರು. ಅವರಲ್ಲಿ ಅವನ ದರ್ಬಾರಿಗೆ ಸೇರಿದ ದಖನೀಯ ಶ್ರೇಷ್ಠ ಕವಿ ನುಸರಾತಿಯೂ ಒಬ್ಬ. ಅಲಿಯೆಂಬುದು ಅವನ ಕಾವ್ಯನಾಮ. ಮಹಮದ್ ಆದಿಲ್‍ಷಾನ ಆಸ್ಥಾನ ಕವಿ ಕಮಾಲ್ ಖಾನ್ ರುಸ್ತುಮೀ (1648 ರಲ್ಲಿ ಖಾಮರ್ ನಾಮ ಎನ್ನುವ ಬೃಹತ್ ಪರ್ಷಿಯನ್ ಕೃತಿಯನ್ನು ಅದೇ ಹೆಸರಿನಲ್ಲಿ ದಖನಿಗೆ ಸರಳಾನುವಾದ ಮಾಡಿದ. ದಖನೀಯ ಮಹಾಕಾವ್ಯಗಳಲ್ಲಿ ಅತ್ಯಂತ ಶ್ರೇಷ್ಠವಾದ್ದು. ಮತ್ತೊಬ್ಬ ಶ್ರೇಷ್ಠ ಕವಿ ಮುಸರಾಲೆ (ಮರಣ 1674) ಅಲಿ ಆದಿಲ್ ಷಾII ನ ಆಸ್ಥಾನಕವಿಯಾಗಿದ್ದುದಲ್ಲದೆ ಕಾವ್ಯ ಪ್ರಕಾರದಲ್ಲಿ ಅವನ ಅನುಯಾಯಿಯೂ ಆಗಿದ್ದ. ಅವನು ಗುಲ್‍ಷಾನೆ ಇಷ್ಕ ಎಂಬ ವರ್ಣನಾತ್ಮಕ ಕಾವ್ಯದ ಕರ್ತೃವಲ್ಲದೆ ಅಲಿನಾಮ ಎನ್ನುವ ಹೆಸರಿನಲ್ಲಿ ತನ್ನ ಆಶ್ರಯದಾತನ ಯುದ್ಧ ಸಾಹಸಗಳನ್ನು ವರ್ಣಿಸುವ ರುಸ್ತುಮೀ ಎಂಬ ಉತ್ತಮವಾದ ಮಹಾಕಾವ್ಯವನ್ನು ಬರೆದ. ಬಿಜಾಪುರದಲ್ಲಿ ಸೃಷ್ಟಿಗೊಂಡ ಅತ್ಯುತ್ತಮ ಕಾವ್ಯಕೃತಿಗಳಾದ ಇವು ಆಗಿನ ಕಾಲದ ನಾಗರಿಕತೆ ಮತ್ತು ಸಂಸ್ಕøತಿಗಳ ಮೇಲೆ ಬೆಳಕು ಬೀರುತ್ತವೆ. ಈ ಕೃತಿಗಳಲ್ಲಿ ಕವಿ ತನ್ನ ಎಲ್ಲ ಕಾವ್ಯಶಕ್ತಿಯನ್ನೂ ಮೆರೆದಿದ್ದಾನೆ.

ಬಿಜಾಪುರ್ ಷಾಹಿಯ ಕಡೆಯ ದಿನಗಳಲ್ಲಿ ಪ್ರವರ್ಧಮಾನಗೊಂಡ ಕವಿ ಹಾಷಿಮಿ ದಖನೀಯಲ್ಲಿ ರೀಖ್ತೀ ಕಾವ್ಯ ಪ್ರಕಾರದ ಸ್ಥಾಪಕನಾದ. ಅಬ್ದುಲ್, ಅತಿಷಿ, ಮುಖಯಿ, ಅಮೀನ್, ಷಂಖೀ, ಸನದೀ, ಮಲ್ಲಿಕ್, ಖುಷ್‍ನೂದ್, ದವಲತ್, ಷಾಮಲಿಕ್, ಅಯಾಘಿ, ಸೇವಾ, ಅಲೀ, ಕರೀಮ್, ಮುರ್ತಜಾ, ಹುಸೇನ್, ಮುಖ್ತಾರ್, ಕ್ಯುದ್ರತೀ, ಮೋಮಿನ್, ಖಾದಿರ್, ಷಾಮಸ್, ಅರಫ್ ಮೌಜಮ್ ಮತ್ತಿತರ ಕವಿಗಳು ಬಿಜಾಪುರದಲ್ಲಿ ಸೃಷ್ಟಿಗೊಂಡ ಸಾಹಿತ್ಯಕ್ಕೆ ತಮ್ಮ ಅಮೂಲ್ಯ ಕಾಣಿಕೆಗಳನ್ನು ನೀಡಿದರು.

ಕುತುಬ್ ಶಾಹಿ ವಂಶದ 5 ನೆಯ ದೊರೆ ಸುಲ್ತಾನ್ ಕುಲೀ ಕುತುಬ್ ಷಾ (1580 - 1611) ವೈವಿಧ್ಯಮಯ ಪ್ರತಿಭೆಯ ಕವಿ. ಕುತುಬ್ ಷಾ ಮತ್ತು ಮಾನಿ ಎಂಬುದು ಅವನ ಕಾವ್ಯನಾಮ. ಈತ ಹೈದರಾಬಾದ್ ನಗರವನ್ನು ಸ್ಥಾಪಿಸಿ ಅದನ್ನು ರಾಜಧಾನಿಯಾಗಿ ಮಾಡಿಕೊಂಡ. ಇವನ ದರ್ಬಾರಿನಲ್ಲಿ ವಿದ್ವಾಂಸರು, ಬರಹಗಾರರು ಕವಿಗಳು ಗುಂಪುಗೂಡಿದರು. ಈತ ಪರ್ಷಿಯನ್ ಮತ್ತು ದಖನೀ ಭಾಷೆಗಳಲ್ಲಿ ಕಿರುಜೀವನ ಚಿತ್ರಗಳನ್ನು ಬರೆದ. ಲಕ್ಷ ಪದ್ಯಗಳಿಗೂ ಮೀರಿದ ದಖನೀ ಕವಿತೆಗಳ ಕುಲಿಯಾತ್ವವೊಂದನ್ನು ಈತ ಬಿಟ್ಟಿದ್ದಾನೆ. ದಖನೀ ಭಾಷೆಯಲ್ಲಿ ಸಾಹಿತ್ಯಿಕ ಕೃತಿಗಳನ್ನು ಮೊಟ್ಟಮೊದಲಿಗೆ ಬರೆದ ರಾಜಕವಿ ಈತ. ತನ್ನ ಕಾವ್ಯದಲ್ಲಿ ಅತಿ ಹೆಚ್ಚಿನ ವಸ್ತುವೈವಿಧ್ಯವನ್ನು ತರುವುದಲ್ಲದೆ ಬಹುಪಾಲು ಎಲ್ಲ ಛಂದೋರೂಪಗಳನ್ನೂ ಬಳಸಿಕೊಂಡಿದ್ದಾನೆ. ಗಜûಲ್, ರೋಮ್ಯಾನ್ಸುಗಳು. ಶೋಕಗೀತೆಗಳು - ಇವನ್ನು ರಚಿಸಿದ ಮೊಟ್ಟಮೊದಲ ಕವಿ ಈತ, ಇವನ ಉದ್ದೇಶ, ವಸ್ತು ಮತ್ತು ಶೈಲಿಗಳು ಭಾರತೀಯವೇ ವಿನಾ ಪರ್ಷಿಯನ್ ಅಲ್ಲ. ಹಿಂದೂ ಹಬ್ಬ ಹರಿದಿನಗಳನ್ನು ಕುರಿತು ವಿಚಾರ ಮಾಡಿರುವುದಲ್ಲದೆ ಈತ ತನ್ನ ಕಾವ್ಯದಲ್ಲಿ ಸಂಪೂರ್ಣ ಭಾರತೀಯ ಸಂಸ್ಕøತಿಯನ್ನು ಪ್ರದರ್ಶಿಸಿದ್ದಾನೆ. ಈತನ ಪ್ರಕೃತಿವರ್ಣ ಅಸದಳವಾದುದು. ಸುಸಜ್ಜಿತ ಬೃಹದ್ ಪ್ರಮಾಣದ ಕುಲಿಯಾತ್ ಅನ್ನು ಸೃಷ್ಟಿಸಿದ ಮೊದಲಿಗನಿವ. ಇವನ ಮೊಮ್ಮಗ, ವಂಶದ 7 ನೆಯ ದೊರೆ ಅಬ್ದುಲ್ಲಾ ಕುತುಬ್ ಶಾಹಿ (1625 - 1672) ಶ್ರೇಷ್ಠ ಮಟ್ಟದ ಕವಿತೆಯಿಲ್ಲದ ದಖನೀ ಕವಿತೆಗಳ ಕುಲಿಯಾರ್ ಒಂದನ್ನು ಬಿಟ್ಟಿದ್ದಾನೆ. ಮಹಮದ್ ಕುಲಿ ಕುತುಬ್ ಷಾನ ಆಸ್ಥಾನ ಕವಿ ಮುಲ್ಲಾ ವಾಜ್ಜಿ ಶ್ರೇಷ್ಠ ಗದ್ಯಪದ್ಯ ಕೃತಿಗಳಾದ ಕುತುಬ್ ಮುಷ್ತರಿ (1609) ಮತ್ತು ಸಬ್‍ರಸ್‍ಗಳನ್ನು (1635) ರಚಿಸಿದ್ದಾರೆ. ಮೊದಲನೆಯ ಕೃತಿ. ಅನಂತ ರಾಜನಾದ ಕುಲಿಯ ಪ್ರಣಯ ಸಾಹಸಗಳನ್ನು ವರ್ಣಿಸುತ್ತದೆ. ಸಂಪೂರ್ಣ ಭಾರತೀಯವಾದ ಈ ಕೃತಿ ಮಧುರವಾದ ಭಾಷೆಯಲ್ಲಿದ್ದು ವರ್ಣನೆಗಳು ಉಜ್ವಲ, ವರ್ಣಮಯ ಮತ್ತು ಸಹಜ ಆಗಿವೆ. ಈ ಕೃತಿ ಪ್ರಾದೇಶಿಕ ಸಂಸ್ಕøತಿಯನ್ನು ಚಿತ್ರಿಸುತ್ತದೆ. ಎರಡನೆಯದು ರೂಪಕ ಕಥೆಯಾಗಿದ್ದ ಹೃದಯ ಮತ್ತು ಸೌಂದರ್ಯ ಘರ್ಷಣೆಯನ್ನು ಚಿತ್ರಿಸುತ್ತದೆ. ದೈವೀಪ್ರೇಮ ಮತ್ತು ಸೂಫೀ ಸಿದ್ಧಾಂತಗಳ ಮಂಡನೆ ಇಲ್ಲಿನ ಮುಖ್ಯ ಉದ್ದೇಶ ಮತ್ತು ವಸ್ತು. ಕೃತಿಯಲ್ಲಿ ಉದ್ದಕ್ಕೂ ಮಧುರ, ಸರಳ, ಲಯಬದ್ಧಗದ್ಯವಿದೆ. ಇದು ದಖನೀಯ ಮೊಟ್ಟಮೊದಲ ಸಾಹಿತ್ಯಿಕ ಗದ್ಯಕೃತಿ, ಅಬ್ದುಲ್ಲ ಕುತುಬ್ ಷಾನ ದರ್ಬಾರಿನಲ್ಲಿ ಉನ್ನತ ಶಕ್ತಿ ಮತ್ತು ಸ್ಥಾನವನ್ನು ಪಡೆದಿದ್ದ ಕವಿ ಘವ್ವಸೀ ದಖನೀಯ ಪ್ರಸಿದ್ಧ ವರ್ಣನಾತ್ಮಕ ಕಾವ್ಯಗಳಾದ ಸೈಪುಲ್ ಮುಲೂಕೊಬಡೀ ಉಲ್ ಜಮಾಲ್ (1624) ಮತ್ತು ತೋತೀನಾಮಾಗಳನ್ನು (1639) ಪರ್ಷಿಯನ್ ಭಾಷೆಯಿಂದ ಸರಳಾನುವಾದ ಮಾಡಿದ. ಈತ ದಖನೀ ಭಾಷೆಯ ಕುಲಿಯಾತ್ ಅನ್ನು ಬಿಟ್ಟಿದ್ದಾನೆ. ಅಬ್ದುಲ್ ಕುತುಬ್ ಷಾನ ದರ್ಬಾರಿನಲ್ಲಿದ್ದ ಇಬ್ನ್ ನಿಷತಿ ಮತ್ತೊಬ್ಬ ಮಹಾಕವಿ. ದಖನೀಯ ಶ್ರೇಷ್ಠ ಮತ್ತು ಪ್ರಸಿದ್ಧ ವರ್ಣನಾತ್ಮಕ ಕಾವ್ಯ ಫೂಲ್ ಬನ್ ಅನ್ನು ರಚಿಸಿದವ. ಇದಕ್ಕೆ ಚಾರಿತ್ರಿಕ ಮತ್ತು ಸಾಂಸ್ಕøತಿಕ ದೃಷ್ಟಿಯಿಂದ ಮಹತ್ತ್ವವಿದೆ. ಇದು ರೋಮ್ಯಾನ್ಸ್ ಕಾವ್ಯ. ಪರ್ಷಿಯನ್ ಭಾಷೆಯ ಬಾಸತೀನ್ ಎಂಬುದರ ಸರಳಾನುವಾದ. ಈ ಕೃತಿಯ ಶೈಲಿ ನುಡಿಗಟ್ಟು ಮತ್ತು ಉದ್ದೇಶ ಶ್ಲಾಘನೀಯವಾದುದು. ಫಿರೋಜ್, ಮಹಮೂದ್, ಖಯಾಲೀ, ಕುತ್ಬೀ, ಸುಲ್ತಾನ್, ಬಲಾಕಿ, ತೆಬೀ, ಸೇವಕ್, ಫೈಬ್, ಫ್ಲಜ್ಲ್, ನೂರಿ ಕಾಜಿಂ, ಷಾರಾಜು ಮತ್ತು ಮಿರ್ಜಾ ಮುಂತಾದ ಕವಿಗಳು ಕುತುಬ್ ಷಾಹಿ ಕಾಲದಲ್ಲಿ ಅಮೂಲ್ಯ ಕಾಣಿಕೆಗಳಿಂದ ದಖನೀ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಭಾವಗೀತೆ, ಮಹಾಕಾವ್ಯ, ಸಾಂಕೇತಿಕ ಕಾವ್ಯ, ಧಾರ್ಮಿಕ ಮತ್ತು ಸೂಫೀ ಸಿದ್ಧಾಂತವನ್ನು ಪ್ರತಿಪಾದಿಸುವ ಕೃತಿಗಳೊಡನೆ ಶಾಸ್ತ್ರ ಪ್ರತಿಪಾದನ (ಮರ್ಸಿಯ) ಗ್ರಂಥಗಳೂ ದಖನೀಯಲ್ಲಿ ಹೆಚ್ಚಿದುವು. ಈ ವಿಷಯದ ಬಗ್ಗೆ ಕೆಲವು ಕವಿಗಳು ಹೆಚ್ಚು ಗಮನಕೊಟ್ಟುದಲ್ಲದೆ ಮತ್ತೆ ಕೆಲವು ಕವಿಗಳು ದಖನೀಯಲ್ಲಿ ಮರ್ಸಿಯಗಳನ್ನು ರಚಿಸಿದರು. ಇದರ ಜತೆಗೆ ವಜ್ಹೀ, ಮೀರಾನ್ಜೀ, ಖುದಾನುಮಾ, ಮೀರಾನ್ ಯಾಕುಬ್, ಅಬೀದ್ ಶಾ ಮತ್ತು ಸುಲ್ತಾನರು ಕುತುಬ್ ಷಾಹಿ ಕಾಲದ ಪ್ರಮುಖ ಗದ್ಯ ಗ್ರಂಥಗಳನ್ನು ರಚಿಸಿದರು. ಗಮನಾರ್ಹ ಸಂಗತಿಯೆಂದರೆ ಈ ವಂಶದ ಕಡೆಯ ದೊರೆ ತಾನಾಷಾ ಕೂಡ ಒಬ್ಬ ಕವಿಯಾಗಿದ್ದುದು.

ಷೇಕ್ ಅಶ್ರಫ್, ಅಫ್‍ತಾಬೀ, ಮತ್ತು ಷಂಕೀ - ಈ ಮೂವರು ನಿಜಾಂಷಾಹಿ ರಾಜಧಾನಿ ಅಹಮದ್‍ನಗರದ ಪ್ರಮುಖ ಕವಿಗಳು. ಬರೀದ್‍ಷಾಹಿ ರಾಜಧಾನಿಯಾದ ಬೀದರ್‍ನಲ್ಲಿ ಪ್ರವರ್ಧಮಾನಗೊಂಡ ಕುರೈಷಿ ಕೂಡ ಒಬ್ಬ ಪ್ರಮುಖ ಕವಿಯೇ.
ಮುಗಲರ ಕಾಲದಲ್ಲಿ ಔರಂಗಾಬಾದ್ ಮತ್ತು ಬರ್ಹಾಂಪುರಗಳು ಸಾಹಿತ್ಯಿಕ ಕೇಂದ್ರಗಳಾಗಿದ್ದುವು. ವಿದ್ವಾಂಸರು, ಕವಿಗಳು ಮತ್ತು ಬರಹಗಾರರು ಅಲ್ಲಿ ಒಂದುಗೂಡಿ ಮುಗಲರ ಅಧಿಕಾರಿಗಳಿಂದ ಪ್ರೋತ್ಸಾಹಿಸಲ್ಪಟ್ಟರು. ಔರಂಗಜೇಬನ ದಂಡು ದಕ್ಷಿಣಕ್ಕೆ ಪ್ರವೇಶಿಸಿ (1682) ಬಿಜಾಪುರ (1686) ಗೋಲ್ಕೊಂಡ (1687) ಮತ್ತು ಉಳಿದ ಮೂರು ಮುಸ್ಲಿಂ ರಾಜ್ಯಗಳನ್ನು ಗೆದ್ದು ಈ ಪ್ರದೇಶವನ್ನು ಮುಗಲ ಸಂಸ್ಥಾನವನ್ನಾಗಿ ಮಾಡಿತು. ಉತ್ತರ ಭಾರತದಂಡು ಎರಡು ದಶಕಗಳಿಗೂ ಹೆಚ್ಚು ಕಾಲ ನೆಲಸಿ ದಖನೀ ಭಾಷೆ ಮತ್ತು ಸಾಹಿತ್ಯದ ಮೇಲೆ ಹೆಚ್ಚೂ ಪ್ರಭಾವಬೀರಿತು. ದಖನೀಯ ಮೇಲೆ ಪರ್ಷಿಯನ್ನೀಕೃತ ಉರ್ದುವಿನ ಪ್ರಭಾವನನ್ನು ಉತ್ತರ ಭಾರತದ ಜನರು ತಂದರು. ದಕ್ಷಿಣದಿಂದ ದೆಹಲಿಗೆ ಕವಿಗಳು ಪ್ರಯಾಣ ಮಾಡಿದರು. ಅಲ್ಲದೆ ಅವರ ದಖನೀ ಕಾವ್ಯದ ಪ್ರಭಾವ ಉರ್ದು ಕಾವ್ಯದ ಪ್ರಾರಂಭಕ್ಕೆ ಕಾರಣವಾಯಿತು. ಐದು ರಾಜ್ಯಗಳ ಪತನ ಮತ್ತು ಮುಗಲರ ಕಾಲದಲ್ಲಿದ್ದ ಗೊಂದಲಮಯ ವಾತವರಣ ದಖನೀ ಭಾಷೆಯ ಬೆಳೆವಣಿಗೆಗೆ ಪ್ರತಿಕೂಲವಾಗಿದ್ದುದ್ದಲ್ಲದೆ ದಖನೀಸಾಹಿತ್ಯದ ಅಧಃಪತನಕ್ಕೂ ಕಾರಣವಾಯಿತು. ಈ ಕಾಲದಲ್ಲಿ ರಾಜಾಶ್ರಯ ದೊರೆತ ಒಂದೇ ಒಂದು ಘಟನೆಯೆಂದರೆ ಔರಂಗಜೇಬನು ನುಸ್ರತಿಯನ್ನು ಗೌರವಿಸಿ ಆಸ್ಥಾನಕವಿಯೆಂದು ಬಿರುದುಕೊಟ್ಟದ್ದು. ಜೂಫೀ, ಜೌತೇ, ಅಮೀನ್, ರಾಜೀ, ದರ್ಯಾ, ಅಬ್ದುಲ್ ಮಹಮದ್ ತಾರೀನ್, ಷೇಕ್ ಜೀವನ್ ಫತ್, ಅಶ್ರಫ್, ಫೀರಾಕೀ, ನಾದೀಂ, ತೀಮ್, ಅಹ್ಮದ್, ಇಜಿಜ್, ತಲಿಲೆ, ಅಜಾದ್, ಹಾಶಿಂ ಅಲಿ, ಇಮಾಮೀ, ರಿಜಾ, ಗುಲಾಮೀಕಾದಿರ್, ಸಾಮೀದಾವೂದ, ಸಾರಿಂ, ಮತ್ತು ಕಿ - ಯಾಸೀಗಳಂಥ ಬಹುಪಾಲು ಜನ ಈ ಕಾಲದಲ್ಲಿ ಧಾರ್ಮಿಕ ವಿಷಯಗಳ ಮೇಲೆ ಕಥನಾತ್ಮಕ ಕಾವ್ಯಗಳನ್ನು ರಚಿಸಿದರು. ಕೆಲಕಾಲದ ಮೇಲೆ ಔರಂಗಾಬಾದಿನಲ್ಲಿ ನೆಲೆಗೊಂಡ ಬಿಜಾಪುರದ ಬಳಿಯ ಗೋಗಿಯೆಂಬ ಊರಿನ ಖಾಜೀ ಮಹಮದ್ ಬ್ರಾಹಿ ಸೂಫೀಧರ್ಮದ ಪ್ರಸಿದ್ದ ವಿವರಣಾತ್ಮಕ ಕಾರ್ಯ ಮನಲಗನ್ ಅನ್ನು ಶುದ್ಧ ದಖನೀಯಲ್ಲಿ ಬರೆದ. ಈ ಕೃತಿಯ ನುಡಿಗಟ್ಟು, ಶೈಲಿ ಮತ್ತೆ ಉದ್ದೇಶ ಎಷ್ಟು ಪ್ರಭಾವಶಾಲಿಯಾಗಿದ್ದಿತ್ತೆಂದರೆ ಇಡೀ ದಕ್ಷಿಣಭಾರತದಲ್ಲಿ ಇದು ಜನಪ್ರಿಯವಾಯಿತು. ಈ ಕೃತಿಯ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಅರ್ಥ್ ಮನ್‍ಲಗನ್ ಎಂಬ ಶಬ್ದಕೋಶ ಈ ಕೃತಿಗೆ ಅನುಬಂಧವಾಗಿ ಸೇರಿಸಿಲ್ಪಟ್ಟಿತು. ಇದು ಇಂದಿಗೂ ದಕ್ಷಿಣಭಾರತದಲ್ಲಿ ಜನಪ್ರಿಯವಾಗಿದೆ. ವಾಜಿಹುದ್ದೀನ್ ವಾಜ್ದೀ ಈ ಕಾಲದ ಮತ್ತೊಬ್ಬ ಶ್ರೇಷ್ಠ ಸೂಫಿಕವಿ. ಈತ ಪರ್ಷಿಯನ್ನಿನ ಎರಡು ಸೂಫೀಗ್ರಂಥಗಳಾದ ಫರೀದುದ್ದೀನ್ ಅತ್ತಾರ್ ಮನ್ತಿ ಕುತ್‍ತೈರ್ ಮತ್ತು ಗುಲೋಹರ್ಮುಜ್‍ಗಳನ್ನು ದಖನೀ ಪದ್ಯಗಳಾದ ಪಂಛೀಚಾಚ್ಛ (1720) ಮತ್ತು ತುಹಾಪಾಯೆ ಅಶಿಕಾನ್‍ಗಳಲ್ಲಿ (1741) ಸರಳಾನುವಾದ ಮಾಡಿದ. ಸ್ವತಂತ್ರವಾಗಿ ಮಖಜ್‍ನ ಇಷ್ಕ್ ಎಂಬ ವರ್ಣನಾಮಕ ಮೂರನೆಯ ಕೃತಿಯನ್ನು ರಚಿಸಿದ. ಮೊದಲ ಕೃತಿಗಾಗಿ ಈತ ತುಂಬ ಗೌರವವನ್ನು ಪಡೆದ. ಇವನ ಕೃತಿಗಳು ತಂತ್ರದ ದೃಷ್ಟಿಯಿಂದ ಪಕ್ಕ, ಉದ್ದೇಶ ಮತ್ತು ಶೈಲಿಯ ದೃಷ್ಟಿಯಿಂದ ಪ್ರಶಂಸನೀಯವಾದವು. ವೆಲ್ಲೂರಿನ ಮಹಮದ್ ಫಯಾಜ್‍ವಲೀ ವೆಲ್ಲೂರಿ ಮಹಮದ್ ಜೈಸಿಯ ಪದ್ಮಾವತ್ ಆಧಾರಿತ ಕಿಸ್ತಾಯೆ ರತನೋ ಪದಮ್ ಎಂಬ ಶೃಂಗಾರ ಕಾವ್ಯವನ್ನೂ ಕಾಶಿಫಿಯ ಪ್ರಸಿದ್ಧ ಕೃತಿ ರಮ್ಜತುಷ್ ಷುಹದವಿಯನ್ನು ಅದೇ ಹೆಸರಿನಿಂದಲೂ ಅನುವಾದ ಮಾಡಿದ (1707).

ದಕ್ಷಿಣದ ಅನೇಕ ಕವಿಗಳ ಮೇಲೆ ತಮ್ಮ ಛಾಯೆಯನ್ನು ಪಸರಿಸಿದ ವಲೀ ಮತ್ತು ಇರಾಜರು ಮುಗಲರ ಕಾಲದ ಅತ್ಯಂತ ಪ್ರಮುಖ ಕವಿಗಳು. ಸಾಮಾನ್ಯವಾಗಿ ವಲೀದಖನೀಯೆಂದು ಕರೆಯಲ್ಪಡುವ ವಲೀ ಮಹಮದ್ ವಲಿ (1667 - 1741) ಔರಂಗಾಬಾದಿನಲ್ಲಿ ಹುಟ್ಟಿದ. ಗುಜರಾತಿನ ಸೂರತ್ತಿನಲ್ಲಿ ವಿದ್ಯಾಭ್ಯಾಸವನ್ನು ಪಡೆದ. ಸ್ವಭಾವತಃ ಕವಿಯಾಗಿದ್ದ ಇವನು ತನ್ನ ಚಿಕ್ಕವಯಸ್ಸಿನಿಂದಲೇ ಕಾವ್ಯವನ್ನು ಹೇಳತೊಡಗಿದೆ. ಮಸ್ನವಿಗಿಂತ ಗಜûಲ್ ಹೇಳುವುದರಲ್ಲಿ ಗಮನಹರಿಸಿದ ಮೊದಲ ದಾಕ್ಷಿಣಾತ್ಯ ಕವಿ ಈತ. ಹಾಗಾಗಿ ಈತ ದಖನೀಕಾವ್ಯದ ಸುಧಾರಕನಾದ. 1835 ರಲ್ಲಿ ಪ್ಯಾರಿಸ್ಸಿನಲ್ಲಿ ಮೊದಲ ಬಾರಿಗೆ ಗಾರ್‍ನಾಡಿ ತಾಸ್ಸಿಯಿಂದ ಸಂಪಾದಿಲ್ಪಟ್ಟು ಪ್ರಕಟಿಸಲ್ಪಟ್ಟು ದಖನೀಗಜûಲುಗಳ ಪೂರ್ಣ ದಿವಾನವನ್ನು ಈತ ಬಿಟ್ಟಿದ್ದಾನೆ. ಸರಳತೆ, ಶೈಲಿಯ ಘನತೆ, ವಾಗ್ಧೋರಣೆ, ಸಹಜತೆ, ದೈವೀಪ್ರೇಮದ ಉದ್ದೇಶ ಮತ್ತು ಮಧುರ ಭಾಷೆಯಲ್ಲಿ ಈ ಉನ್ನತಮಟ್ಟದ ಕವಿ. ಉರ್ದುಕಾವ್ಯದ ಮೊದಲ ದರ್ಜೆಯ ಆರು ಕವಿಗಳಲ್ಲಿ ಈತ ಒಬ್ಬನೆಂದು ಪರಿಗಣಿತವಾಗಿದ್ದಾನೆ. 1700 ಮತ್ತು 1722 ರಲ್ಲಿ ಎರಡು ಬಾರಿ ದೆಹಲಿಗೆ ಭೇಟಿ ನೀಡಿದ್ದ. ಇವನ ಮೊಟ್ಟ ಮೊದಲ ಭೇಟಿಯೇ ದೆಹಲಿಯಲ್ಲಿ ಉರ್ದುಕಾವ್ಯದ ಅತಿಭಾರಕ್ಕೆ ಕಾರಣವಾಯಿತು. ಇದುವರೆಗೂ ದೆಹಲಿಯ ಕವಿಗಳು ಉರ್ದುವಿನಲ್ಲಿ ಮಾತನಾಡಿ ಪರ್ಷಿಯನ್‍ನಲ್ಲಿ ಬರೆಯುತ್ತಿದ್ದರು. ದಕ್ಷಿಣದಲ್ಲಿ 400 ವರ್ಷಗಳಿಂದ ಉರ್ದುವಿನಲ್ಲಿ ಗದ್ಯಪದ್ಯ ಸೃಷ್ಟಿಯಾಗುತ್ತಿದ್ದ ಸಂಗತಿ ಅವರಿಗೆ ತಿಳಿದೇ ಇರಲಿಲ್ಲ. ವಲಿಯ ಕಾವ್ಯವನ್ನು ಕೇಳಿದ ಆ ಜನ ಅವನು ಆ ಭಾಷೆಯಲ್ಲಿ ತನ್ನ ಅಲೋಚನೆಗಳನ್ನು ಅಭಿವ್ಯಕ್ತಿಗೊಳಿಸಿದ ರೀತಿಗಳನ್ನು ಕಂಡು ಮಾರುಹೋದರು. ವಲಿಯ ಪದ್ಯಗಳು ಬಹುಬೇಗ ಜನಪ್ರಿಯವಾದುವು. ಬಜಾರುಗಳಲ್ಲಿ ಅವನ ಕಾವ್ಯವನ್ನು ಹಾಡತೊಡಗಿದರು. ಎಲ್ಲ ಕಡೆಯೂ ಅವನಿಗೆ ಗೌರವಪೂರ್ವಕ ಸ್ವಾಗತ ದೊರೆಯಿತು. ಹೀಗೆ ವಲಿಯ ಭೇಟಿ ಉತ್ತರ ಭಾರತದ ಕಾವ್ಯದಲ್ಲಿ ದೊಡ್ಡ ಕ್ರಾಂತಿಯನ್ನುಂಟುಮಾಡಿತಲ್ಲದೆ ಅದನ್ನು ಪರ್ಷಿಯನ್‍ನಿಂದ ಉರ್ದುವಿಗೆ ಬದಲಾಯಿಸಿತು. ಆದ್ದರಿಂದ ದೆಹಲಿಯ ಕವಿಗಳು ದಖನೀ ಕವಿಗಳನ್ನು ಅನುಸರಿಸಿದರು ಮತ್ತು ಆಡುಭಾಷೆಯಾದ ಉರ್ದುವಿನಲ್ಲಿ ಕಾವ್ಯವನ್ನು ರಚಿಸಿದರು.

	ದಕ್ಷಿಣ ಭಾರತದಲ್ಲಿ ಮುಗಲರ ಆಳ್ವಿಕೆ ಕೊನೆಗೊಂಡ ಮೇಲೆ (1730) ದಖನೀಯು ದಕ್ಷಿಣದಲ್ಲಿ ಆಡುಭಾಷೆಯಾಗಿದೆ. ಮುಂದುವರೆಯಿತು. ಇಂದಿಗೂ ಈ ಪ್ರದೇಶದಲ್ಲಿ ಆಡುಭಾಷೆಯಾಗಿದೆ. ಗದ್ಯಪದ್ಯಗಳ ಭಾಷೆಯಾಗಿ 18ನೆಯ ಶತಕದ ಮಧ್ಯದವರೆಗೂ ಹೈದರಾಬಾದ್, ಮುದ್ರಾಸ್, ಮೈಸೂರು ಮತ್ತು ಮಹಾರಾಷ್ಟ್ರಗಳಲ್ಲಿ ಬಳಕೆಯಲ್ಲಿತ್ತು. ಆದರೆ ಕ್ರಮೇಣ ಇದು ಉತ್ತರದಿಂದ ಬಂದ ಪರ್ಷಿಯನೀಕೃತ ಉರ್ದುವಿನ ಪ್ರಭಾವದಲ್ಲಿ ತನ್ನ ಬಣ್ಣವನ್ನು ಕಳೆದು ಕೊಂಡಿತು. ಅಂತ್ಯದಲ್ಲಿ ಉರ್ದುವು ದಕ್ಷಿಣದಲ್ಲಿ ಬರವಣಿಗೆಯ ಭಾಷೆಯಾಗಿ ದಖನೀಯನ್ನು ಬದಲಾಯಿಸಿತು. ಇದರಿಂದ ಸ್ಪಷ್ಟವಾಗುತ್ತದೆ-ದಕ್ಷಿಣ ಭಾರತದಲ್ಲಿ ಪ್ರವರ್ಧಮಾನಕ್ಕೆ ಬಂದು ಸ್ವತಂತ್ರ ಭಾಷೆಯಾದ ದಖನೀ ಅಥವಾ ಉರ್ದು ಜಯಪ್ರದಗೊಂಡಿತು. ಉತ್ತರ ಭಾರತದ ಜನ ಯೋಚಿಸುವ ಮೊದಲೇ 300 ವರ್ಷಗಳ ಕಾಲ ಶ್ರೇಷ್ಠ ಕಾವ್ಯವನ್ನು ರಚಿಸಿ ತನ್ನದಾಗಿ ಮಾಡಿ ಕೊಂಡಿತು. ಬಹುಪಾಲು ದಖನೀ ಕೃತಿಗಳು ಹಸ್ತಪ್ರತಿಯ ರೂಪದಲ್ಲಿ ಹೈದರಾಬಾದು, ಮೈಸೂರು, ಮದ್ರಾಸು, ಮುಂಬಯಿ ಮತ್ತು ಬ್ರಿಟನ್ನಿನ ಗ್ರಂಥ ಭಂಡಾರಗಳಲ್ಲಿ ರಕ್ಷಿಸಲ್ಪಟ್ಟಿದೆ. ಅವುಗಳಲ್ಲಿ ಬಹುಪಾಲು (ವೈಯುಕ್ತಿಕ) ವಿದ್ವಾಂಸರಿಂದಲೂ ಸಂಘಸಂಸ್ಥೆಗಳಿಂದಲೂ ಸಂಪಾದಿಸಲ್ಪಟ್ಟು ಪ್ರಕಟವಾಗಿವೆ. ದಖನೀಭಾಷೆ ಮತ್ತು ಸಾಹಿತ್ಯದ ಬಗ್ಗೆ ಇದುವರೆಗೆ ಸಾಕಷ್ಟು ಸಂಶೋಧನೆ ನಡೆದಿದೆ. ಈ ಕೆಲಸ ಈಚಿನ ಕೆಲವು ವರ್ಷಗಳಲ್ಲಿ ವೇಗವಾಗಿ ಮುಂದುವರಿದಿದೆ.
 (ಎಂ.ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ